ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಘಟಕದ ವೆಬ್ಸೈಟ್ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಯನ್ನು ಹಾಕಲಾಗಿದ್ದು, ಭಾರತ ದೇಶವನ್ನು ಟೀಕಿಸಿ ಪಾಕಿಸ್ತಾನವನ್ನು ಹೊಗಳಿ ಭಾರತ ದೇಶದ ಅವಹೇಳನಕಾರಿ ಪೋಸ್ಟ್ಗಳನ್ನು ಅಪ್ಲೋಡ್ ಮಾಡಲಾಗಿದೆ. ಇದು ಹ್ಯಾಕರ್ಗಳ ಕೈವಾಡವಾಗಿದ್ದು ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಉಡುಪಿ ಬಿಜೆಪಿ ಮುಖಂಡರು ಪ್ರಕರಣ ದಾಖಲಿಸಿದ್ದಾರೆ.
ಉಡುಪಿ ಬಿಜೆಪಿಯವ್ರು ಕಳೆದ ಎರಡು ವರ್ಷಗಳ ಹಿಂದೆ ಆರಂಭಿಸಿದ್ದ www.bjpudupi.com ವೆಬ್ಸೈಟ್ ಹ್ಯಾಕ್ ಆಗಿದೆ. ಬಿಜೆಪಿ ವೆಬ್ಸೈಟಿಗೆ ಭೇಟಿ ನೀಡಿದರೆ, ‘ಪಾಕಿಸ್ತಾನ್ ಜಿಂದಾಬಾದ್’ ಎನ್ನುವ ಹೆಡ್ಡಿಂಗ್ತಲೆಬರಹವು ಓದುಗರಿಗೆ ರಾಚುತ್ತದೆ. ಪಾಕಿಸ್ತಾನಿ ಸೇನೆಯವರೊಂದಿಗೆ ಭಾರತೀಯ ಸೈನಿಕ ಕೈಕುಲುಕುವಾಗ ಬೆದರುವಂತಹ ಚಿತ್ರವನ್ನು ತೀರ ಕೆಟ್ಟದ್ದಾಗಿ ಈ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ದುಷ್ಕರ್ಮಿಗಳು ಅಟ್ಟಹಾಸಗೈದಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಘಟಕದ ವೆಬ್ಸೈಟ್ಗೆ ಭೇಟಿ ನೀಡಿದರೆ ಅಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕಾಣುತ್ತದೆ. ಒಂದು ಫೋಟೋವನ್ನು ಅಪ್ಲೋಡ್ ಮಾಡಲಾಗಿದ್ದು, ಚಿತ್ರದ ಕೆಳಗಡೆ ಪಾಕಿಸ್ತಾನಕ್ಕೆ ಸಂಬಂಧಪಟ್ಟ ವಿಚಾರಗಳನ್ನು ತುಂಬಲಾಗಿದೆ. ಅಲ್ಲದೇ ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರನ್ನು ಅವಹೇಳನ ಮಾಡಲಾಗಿದೆ. ಭಾರತ ದೇಶಕ್ಕೆ ಬೆದರಿಕೆ ನೀಡುವ ಸಂದೇಶವನ್ನು ಹಾಕಲಾಗಿದೆ. ದೇಶದ ಸಿಬಿಐ ಮೊದಲಾದ ಏಜೆನ್ಸಿಗಳನ್ನು ಟೀಕಿಸಲಾಗಿದ್ದು, ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್ಐ ವಿಶ್ವದಲ್ಲಿಯೇ ನಂ. 1 ಎಂದು ಹೊಗಳಲಾಗಿದೆ.
ಮಹ್ಹಮದ್ ಬಿಲಾಲ್ ಮತ್ತು ಮೆಂಡಕ್ಸ್ ಎನ್ನುವ ಕಿಡಿಗೇಡಿಗಳ ಹೆಸರಿನಲ್ಲಿ ಈ ವೆಬ್ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿಯಿದ್ದು ಇದು ಫೇಕ್ ಐಡಿ ಇರಬಹುದೆಂದು ಅಂದಾಜಿಸಲಾಗಿದೆ. ಶುಕ್ರವಾರ ಮಧ್ಯಾಹ್ನದ ಬಳಿಕ ಉಡುಪಿ ಬಿಜೆಪಿ ನಿಯೋಗ ಉಡುಪಿ ಎಸ್ಪಿ ರಾಜೇಂದ್ರ ಪ್ರಸಾದ್ ಅವರನ್ನು ಭೇ್ಟಿ ಮಾಡಿದ್ದು ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸ್ದೆ ನೀಡಿರುವ ಬಗ್ಗೆ ಮುಖಂಡ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.