ಕನ್ನಡ ವಾರ್ತೆಗಳು

ಕುಂದಾಪುರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; ಕೋಟೇಶ್ವರ ಮನೆ ಕಳ್ಳತನ ಪ್ರಕರಣದ ಇಬ್ಬರು ಆರೋಪಿಗಳ ಬಂಧನ; 2.70 ಲಕ್ಷ ಮೌಲ್ಯದ ಚಿನ್ನಾಭರಣ, ನ್ಯಾನೋ ಕಾರು ವಶ

Pinterest LinkedIn Tumblr

Koteshwara_kallatana_Aropi (3)

ಕುಂದಾಪುರ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಬ ನೋಡಿ ಹಾಡ ಹಗಲೇ ಮನೆಯ ಬಾಗಿಲು ಒಡೆದು ಕಪಾಟಿನಲ್ಲಿಡಲಾಗಿದ್ದ ಚಿನ್ನಾಭರಣ ಹಾಗೂ ಸಾವಿರಾರು ರೂಪಾಯಿ ನಗದು ದೋಚಿ ಪರಾರಿಯಾದ ಘಟನೆಗೆ ಸಂಬಂಧಿಸಿ ಕುಂದಾಪುರ ಪೊಲೀಸರು ಇಬ್ಬರು ಕಳ್ಳರನ್ನು ಬುಧವಾರ ತಡರಾತ್ರಿ ಬಂಧಿಸಿದ್ದು, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ನಿವಾಸಿ ಸಂತೋಷ್ ಯಾನೆ ಸಂತೋಷಕುಮಾರ್ ಯಾನೆ ಪುರುಷೋತ್ತಮ(26) ಹಾಗೂ ಹಂಗಳೂರಿನ ಶನೀಶ್ವರ ದೇವಸ್ಥಾನ ಸಮೀಪ ವಾಸಿ ಉದಯ ಆಚಾರ್ (31) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಲ್ಲಿ ಸಂತೋಷಕುಮಾರ್ ರಿಪ್ಪನ್ ಪೇಟೆ ಹಾಗೂ ತೀರ್ಥಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದು ತಿಳಿದುಬಂದಿದೆ. ಕಳವು ಆರೋಪಿಗಳಿಗೆ ಕುಂದಾಪುರ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Koteshwara_kallatana_Aropi (3) Koteshwara_kallatana_Aropi (2) Koteshwara_kallatana_Aropi (5) Koteshwara_kallatana_Aropi (6) Koteshwara_kallatana_Aropi (7) Koteshwara_kallatana_Aropi (10) Koteshwara_kallatana_Aropi (8) Koteshwara_kallatana_Aropi (4) Koteshwara_kallatana_Aropi Koteshwara_kallatana_Aropi (1)

ಘಟನೆ ಹಿನ್ನಲೆ: ಡಿ.6 ಕೋಟೇಶ್ವರದ ಕೊಡಿಹಬ್ಬ ಜಾತ್ರೆಯ ಸಂದರ್ಭ ಸಮೀಪದ ಬುಕ್ಕನಬೈಲು ನಿವಾಸಿ ಬಿ.ವಿ.ರಾಘವೇಂದ್ರ ಎಂಬುವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಬ ನೋಡಿ ಹಾಡ ಹಗಲೇ ಮನೆಯ ಬಾಗಿಲು ಒಡೆದು ಕಪಾಟಿನಲ್ಲಿಡಲಾಗಿದ್ದ ಚಿನ್ನಾಭರಣ ಹಾಗೂ ಸಾವಿರಾರು ರೂಪಾಯಿ ನಗದು ದೋಚಿ ಪರಾರಿಯಾದ ಘಟನೆಗೆ ಸಂಬಂಧಿಸಿ ಉಡುಪಿ ಎಸ್ಪಿ ಅವರ ಸೂಚನೆಯಂತೆ ಕುಂದಾಪುರ ವೃತ್ತ ನಿರೀಕ್ಷಕ (ಸರ್ಕಲ್ ಇನ್ಸ್‌ಪೆಕ್ಟರ್) ದಿವಾಕರ ಪಿ.ಎಂ. ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗೆ ಬಲೆಬೀಸಿದ್ದ ಉಪನಿರೀಕ್ಷಕ ನಾಸೀರ್ ಹುಸೇನ್ ನೇತೃತ್ವದ ತಂಡ ಬುಧವಾರ ರಾತ್ರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸೊತ್ತು ವಷ: ಆರೋಪಿಗಳ ಜೊತೆಗೆ ಕಳವು ಮಾಡಲಾಗಿದ್ದ ಎರಡು ನೆಕ್ಲೆಸ್, ಹತ್ತು ಜೊತೆ ಓಲೆ, ಎಂಟು ಉಂಗುರ, ಒಂದು ಚಿನ್ನದ ನಾಣ್ಯ, ಒಂದು ತಾಳಿ ಸರ, ಎರಡು ಎಳೆಯ ಒಂದು ಚೈನ್, ಎರಡು ನಾಣ್ಯಗಳು, ಎರಡು ಬೆಳ್ಳಿಯ ಲಕ್ಷ್ಮೀ ವಿಗ್ರಹಗಳು, ಹಾಗೂ ಕವರಿನಲ್ಲಿಡಲಾಗಿದ್ದ ಆರುವರೆ ಸಾವಿರ ರೂಪಾಯಿ ನಗದು ಮತ್ತು ಡಬ್ಬಿಯಲ್ಲಿ ಹಾಕಿಡಲಾಗಿದ್ದ ಒಂದು ಸಾವಿರ ರೂಪಾಯಿಗಳ ನಾಣ್ಯಗಳನ್ನೊಳಗೊಂಡಂತೆ ವಿವಿಧ ಚಿನ್ನಾಭರಣಗಳನ್ನು ಅಪಹರಿಸಿದ್ದರು. ಬಂಧಿತ ಆರೀಪಗಳಿಂದ ಸುಮಾರು 2 ಲಕ್ಷದ 70 ಸಾವಿರ ರೂ ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ನ್ಯಾನೋ ಕಾರು ಹಾಗೂ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಗುರುವಾರ ರಾತ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಯಾರಿವರು ನಟೋರಿಯಸ್‌ಗಳು: ಬಂಧಿತ ಆರೋಪಿಗಳಿಬ್ಬರೂ ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಭಾಗಿದ್ದರೆನ್ನಲಾಗಿದ್ದು, ಸಂತೋಷ್ ರಿಪ್ಪನ್‌ಪೇಟೆಯಲ್ಲಿ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದು ತಿಳಿದುಬಂದಿದೆ. ಈ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.
ಇ್ನ್ನೋರ್ವ ಆರೋಪಿ ಉದಯ ಆಚಾರ್ ಎಂಬಾತ ಈ ಹಿಂದೆ ಕಳವು ಮಾಡಿದ ಪುರಾತನ ಕಾಲದ ವಿಗ್ರಹಗಳನ್ನು ಕೇರಳಕ್ಕೆ ಮಾರಾಟ ಮಾಡಲು ಸಾಗಿಸುತ್ತಿದ್ದ ಆರೋಪಿಗಳಿಬ್ಬರನ್ನು ಉಡುಪಿ ಡಿಸಿ‌ಐಬಿ ಪೊಲೀಸರು ಅ.೧೨ರಂದು ಬ್ರಹ್ಮಾವರ-ಉಪ್ಪೂರು ಗ್ರಾಮದ ಲಕ್ಷ್ಮೀ ಬಾರ್ ಬಳಿ ರಾ.ಹೆ.೬೬ರಲ್ಲಿ ಬಂಧಿಸಿ ಪುರಾತನ ವಿಗ್ರಹಗಳು ಹಾಗೂ ಇವುಗಳನ್ನು ಸಾಗಿಸುತ್ತಿದ್ದ ಎಸ್ಟೀಮ್ ಕಾರನ್ನು ಪೊಲೀಸರು ವಶಪಡಿಸಿ ಕೊಂಡಿದ್ದರು.

ಕಾರ್ಯಾಚರಣೆಯಲ್ಲಿದ್ದವರು: ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸೀತಾರಾಮ, ವಿಕ್ಟರ್, ಸಂತೋಷ್ ಕೆ.ಎಲ್., ಸಂತೋಷ್ ಬೈಂದೂರು, ರಾಘವೇಂದ್ರ ಉಪ್ಪೂರು, ನಾಗೇಂದ್ರ, ಮಹಾಲಿಂಗ, ರಂಜಿತ್ ಶೆಟ್ಟಿ, ವಿಠಲ ಮೂಡುಬಗೆ, ರಾಜು, ಚಾಲಕರಾದ ರಾಜೀವ ಮತ್ತು ಲೋಕೇಶ್ ಭಾಗವಹಿಸಿದ್ದರು.

ತಂಡಕ್ಕೆ ಬಹುಮಾನ: ಕಳವು ನಡೆದ ಕೇವಲ ಮೂರ್ನಾಲ್ಕು  ದಿನಗಳಲ್ಲಿಯೇ ಆರೋಪಿಗಳನ್ನು ದಸ್ತಗಿರಿ ಮಾಡಿ ಪತ್ತೆ ಮಾಡಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಜೇಂದ್ರ ಪ್ರಸಾದ್ ಅವರು  ಶ್ಲಾಘಿಸಿದ್ದಾರೆ. ಈ  ಪತ್ತೆ ಕಾರ್ಯದಲ್ಲಿ ಭಾಗಿಗಳಾದ ಕುಂದಾಪುರ ಸಿ.ಪಿ.ಐ. ದಿವಾಕರ್ ಹಾಗೂ ಎಸ್ಸೈ ಅವರ ತಂಡಕ್ಕೆನಗದು ಬಹುಮಾನವನ್ನು ಘೋಷಿಸಿರುತ್ತಾರೆ.

Write A Comment