ಕನ್ನಡ ವಾರ್ತೆಗಳು

ಗಂಗೊಳ್ಳಿ ಗಲಭೆ ಪ್ರಕರಣ: ಮುಸ್ಲಿಂ ನಿಯೋಗದೊಂದಿಗೆ ಬಲ್ಕಿಸ್ ಬಾನು ಚರ್ಚೆ; ಶಾಂತಿ ಸೌಹಾರ್ದತೆಗೆ ಕರೆ

Pinterest LinkedIn Tumblr

ಕುಂದಾಪುರ: ಕರ್ನಾಟಕ ರಾಜ್ಯ ಮಹಿಳಾ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷೆ ಬಲ್ಕೀಸ್ ಬಾನು ಬುಧವಾರ ಕುಂದಾಪುರದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಗಂಗೊಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲೀಂ ಸಮುದಾಯದ ಮುಖಂಡರೊಂದಿಗೆ ಚರ್ಚೆ ನಡೆಸಿದರು. ನಂತರ ಸಂತ್ರಸ್ಥರಿಗೆ ಪರಿಹಾರ ಚೆಕ್ ವಿತರಿಸಿ ಮಾತನಾಡಿದರು.

Balkis Banu_visit_Kundapura (1) Balkis Banu_visit_Kundapura (2) Balkis Banu_visit_Kundapura

ಇತ್ತೀಚೆಗೆ ಗಂಗೊಳ್ಳಿಯಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ಮುಸ್ಲಿಂ ಸಮಾಜ ಬಾಂಧವರೊಡನೆ ಚರ್ಚಿಸಲಾಗಿದ್ದು, ಈ ಬಗ್ಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದ ಅವರು, ಈಗಾಗಲೇ ಬೆಂಕಿ ಅನಾಹುತದಲ್ಲಿ ಸಂತ್ರಸ್ಥರಾದವರಿಗೆ ತಲಾ ೨೫ಸಾವಿರ ರೂಪಾಯಿಗಳ ಪರಿಹಾರದ ಚೆಕ್ಕನ್ನು ವಿತರಿಸಲಾಗಿದೆ. ಇದು ಅವರಿಗಾದ ನಷ್ಟ ಭರಸಿಲು ಸಾಧ್ಯವಾಗದು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಹೆಚ್ಚಿನ ಪರಿಹಾರ ಒದಗಿಸುವಂತೆ ಮನವಿ ಮಾಡಲಾಗುವುದು ಎಂದರು. ಪರಸ್ಪರ ಪ್ರೀತಿ ಸೌಹಾರ್ದತೆಯಿದ್ದಾಗ ಶಾಂತಿ ಸಾಧ್ಯ. ಅಸೂಯೆ ದ್ವೇಷಗಳನ್ನು ಹತ್ತಿಕ್ಕಿ ಸೌಹಾರ್ದಯುತ ಬಾಳ್ವೆಯತ್ತ ಗಮನಹರಿಸಿದಾಗ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು ಎಂದು ಹೇಳಿದ್ದಾರೆ.

ಪ್ರತಿಯೊಬ್ಬರಿಗೂ ತಮ್ಮದೇ ಆದ ಹಕ್ಕುಗಳಿವೆ. ಮಾತನಾಡುವ, ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಹಕ್ಕುಗಳ ಜೊತೆಗೆ ಸೌಹಾರ್ದಯುತವಾಗಿ ಬಾಳುವ ಹಕ್ಕೂ ಇದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದ ಅವರು, ಗಂಗೊಳ್ಳಿ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಕೈಗೊಂಡ ಕ್ರಮ ಶ್ಲಾಘನೀಯ. ಅದರ ಜೊತೆಗೆ ಪೊಲೀಸ್ ಇಲಾಖೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭ ಜಿಲ್ಲಾ ವಕ್ಫ್ ಬೋರ್ಡ್‌ನ ಸಲಹಾ ಸಮಿತಿಯ ಅಧ್ಯಕ್ಷ ನಕ್ವಾ ಯಾಹ್ಯಾ, ಕುಂದಾಪುರ ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್, ಕುಂದಾಪುರ ತಹಸೀಲ್ದಾರ್ ಗಾಯತ್ರಿ ನಾಯಕ್, ವೃತ್ತ ನಿರೀಕ್ಷಕ ಪಿ.ಎಂ ದಿವಾಕರ, ಪ್ಲೆಸೆಂಟ ಮಾಲಕ ಇಬ್ರಾಹಿಂ ಕೋಟ, ಕುಂದಾಪುರ ತಾಲ್ಲೂಕು ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎ.ಕೆ ಸಾಹೇಬ್, ಗಂಗೊಳ್ಳಿಯ ಜಮಾತೆ ಮುಸ್ಲಿಂಮೀನ್ ಅಧ್ಯಕ್ಷ ಜಿ.ಎಂ ಇರ್ಷಾದ್, ಕಾರ್ಯದರ್ಶಿ ಎಚ್.ಅಬ್ದುಲ್, ಉಡುಪಿ ಜಿಲ್ಲಾ ಎಪಿಸಿ‌ಅರ್‌ನ ತೌಫಿಕ್ ಗಂಗೊಳ್ಳಿ, ಧರ್ಮಗುರುಗಳಾದ ಉಬೇದುಲ್ಲಾ ಅಭುಬಕರ್ ನದ್ವಿ ಮೊದಲಾದವರು ಉಪಸ್ಥಿತರಿದ್ದರು.

Write A Comment