ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಡಿ.11: ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂದ ಕಾಲೇಜ್ ಆವರಣದಲ್ಲಿ ಮೂರುದಿನಗಳ ಕಾಲ ನಡೆಯಲಿರುವ `ವಿಶ್ವ ತುಳುವೆರೆ ಪರ್ಬ’ ನಾಳೆಯಿಂದ ಆರಂಭಗೊಳ್ಳಲ್ಲಿದ್ದು, ಕೊನೆಯ ಹಂತದ ಸಿದ್ದತೆಗಳು ಭರದಿಂದ ಸಾಗುತ್ತಿವೆ.
ಈಗಾಗಲೇ ಹೆಚ್ಚಿನ ತಯಾರಿಗಳು ಪೂರ್ಣಗೊಂಡಿದ್ದು, ಹೊರ ಆವರಣದಲ್ಲಿ ನಡೆಯಲ್ಲಿರುವ ವಸ್ತುಪ್ರದರ್ಶನ ಮಳಿಗೆ, ಅಟಿಲ್ ಅರಗಣೆ, ಜಾನಪದ ವಸ್ತು ಸಂಗ್ರಹಾಲಯದ ಕಲ, ಛಾಯಚಿತ್ರ ಮಂಟಪ, ಪುಸ್ತಕ ಭಂಡಾರದ ವೇದಿಕೆ ಹಾಗೂ ಇನ್ನಿತರ ಆಟೋಟ ಸ್ಪರ್ಧೆಗಳ ಸಿದ್ದತೆಗಳ ಮತ್ತು ಕಲಾಕೃತಿ ಪ್ರದರ್ಶನಗಳ ವೇದಿಕೆ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ.
ಮೂರು ದಿನಗಳ ಕಾಲ ನಡೆಯುವ ತುಳುವೆರೆ ಪರ್ಬ ಜಾತ್ರೆಯ ವಾತಾವರಣವನ್ನು ನಿರ್ಮಿಸಿದ್ದು ಲಕ್ಷಾಂತರ ತುಳು ಭಾಷಾಪ್ರೇಮಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಡಿ.12ರ ಸಂಜೆ 5.30ಕ್ಕೆ ವಿಶ್ವ ತುಳುವೆರೆ ಪರ್ಬಕ್ಕೆ ಚಾಲನೆ ನೀಡಲಿದ್ದು. ಸಮಾರೋಪ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಸಾಹಿತಿ, ಚಿಂತಕರು ಮಾತ್ರವಲ್ಲದೆ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ. ಡಿ.12ರಂದು ಸಹ್ಯಾದ್ರಿ ತುಳುವೆರೆ ಐಸಿರಿ, ಪುಸ್ತಕ ಭಂಡಾರ, ಕಡಪುದ ಓಡ, ಅಟಿಲ್ ಅರಗಣೆ, ಪ್ರದರ್ಶನಾಲಯ, ಛಾಯಾಚಿತ್ರ ಮಂಟಪದ ಉದ್ಘಾಟನೆ ಇತ್ಯಾದಿ ಕಾರ್ಯಕ್ರಮ ನೆರವೇರಲಿದೆ. ತಾಲೀಮು, ಸೈಕಲ್ ಬ್ಯಾಲೆನ್ಸ್, ತುಳುನಾಡ ತಿಂಡಿ ತಿನಿಸು, ಸಂತೆದ ಕಲ, ಬಲೇ ತೆಲಿಪಾಲೆ, ಕಾವ್ಯ-ಗಾನ-ಕುಂಚ-ನಲಿಕೆ, ಗೋಷ್ಠಿಗಳು, ತುಳು-ಕೊಂಕಣಿ-ಬ್ಯಾರಿ ಅಕಾಡೆಮಿ ಪ್ರಾಯೋಜಿತ ಕಲಾ ಕಾರ್ಯಕ್ರಮಗಳು, ತುಳುವೆರೆ ತುತ್ತೈತ, ತುಳುನಾಡ ವೈಭವ, ಗಾಣದ ಕೊಟ್ಯ, ಪ್ರಾತ್ಯಕ್ಷಿಕೆಗಳು, ಯಕ್ಷಗಾನ, ಪಾಡ್ದನ ಮೇಳ, ನೃತ್ಯ-ಸಂಗೀತ-ಜಾನಪದ ವೈವಿದ್ಯಗಳು ತುಳುವರ ಹಬ್ಬದ ಕಳೆಯೇರಿಸಲಿವೆ.
ತುಳುವೆರೆ ಪರ್ಬ ನಡೆಯುವ ಸಭಾಂಗಣ ಮತ್ತು ವೇದಿಕೆಗಳಿಗೆ ಎಸ್.ಯು.ಪಣಿಯಾಡಿ, ಎಸ್.ಆರ್.ಹೆಗ್ಡೆ, ಪಾದೂರು ಗುರುರಾಜ್ ಭಟ್, ವಿಶು ಕುಮಾರ್, ಡಾ.ವೆಂಕಟರಾಜ ಪುಣಿಂಚಿತ್ತಾಯ, ಕೆದಂಬಾಡಿ ಜತ್ತಪ್ಪ ರೈ ಅವರ ಹೆಸರನ್ನಿರಿಸಲಾಗಿದೆ.