ಕನ್ನಡ ವಾರ್ತೆಗಳು

ಕರಾವಳಿ ಉತ್ಸವ ಮುಂದೂಡಿಕೆ.

Pinterest LinkedIn Tumblr

Dc_Ibrahim_Pics

ಮಂಗಳೂರು,ಡಿ.11  :ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಪ್ರಯುಕ್ತ ಕರಾವಳಿ ಉತ್ಸವ ಉದ್ಘಾಟನೆಯನ್ನು ಡಿಸೆಂಬರ್ 23  ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ. ಡಿಸೆಂಬರ್ 23  ರಿಂದ ಜನವರಿ  1 ರ ವರೆಗೆ ಕರಾವಳಿ ಉತ್ಸವ ನಡೆಯಲಿದೆ. ಸಮಾರೋಪ ಸಮಾರಂಭ ಜನವರಿ 1 ರಂದು ಪಣಂಬೂರು ಬೀಚ್‌ನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿರುತ್ತಾರೆ.

ಅದ್ದೂರಿ ಮೆರವಣಿಗೆ: ಕರಾವಳಿ ಉತ್ಸವದ ಉದ್ಘಾಟನೆಯಂದು ಜಿಲ್ಲೆಯ ಸಂಸ್ಕೃತಿ ಮತ್ತು ಕಲೆ ಪ್ರತಿಬಿಂಬಿಸುವ ಅದ್ದೂರಿಯಾದ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಬುಧವಾರ ಮಂಗಳೂರು ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಮೂಡಬಿದ್ರೆ ಆಳ್ವಾಸ್ ಫೌಂಡೇಶನ್ ಅಧ್ಯಕ್ಷ ಡಾ.ಮೋಹನ್ ಆಳ್ವಾ ಅವರು ಮಾತನಾಡಿ ಜಿಲ್ಲೆಯ ಎಲ್ಲಾ ಕಲಾ ಪ್ರಕಾರಗಳ ತಂಡಗಳನ್ನು ಹಾಗೂ ವಿವಿಧ ವೇಷಗಳ ತಂಡಗಳನ್ನು ಮೆರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು. ಜಿಲ್ಲೆಯ ಸಾಂಸ್ಕೃತಿಕ ಲೋಕದ ಶ್ರೀಮಂತಿಕೆಯು ಮೆರವಣಿಗೆಯಲ್ಲಿ ವ್ಯಕ್ತವಾಗಬೇಕು ಎಂದು ಹೇಳಿದರು.

ಡಿ.23 ರಂದು ಮಧ್ಯಾಹ್ನ ನೆಹರು ಮೈದಾನದಿಂದ ಮಂಗಳಾ ಕ್ರೀಡಾಂಗಣ ಕರಾವಳಿ ಉತ್ಸವ ವೇದಿಕೆಯ ವರೆಗೆ ಮೆರವಣಿಗೆ ಸಂಚರಿಸಲಿದ್ದು,ಸುಮಾರು 35-40 ಕಲಾತಂಡಗಳು ಭಾಗವಹಿಸಲಿವೆ. ಕಲ್ಲಡ್ಕಗೊಂಬೆ,ಕೊಂಬು,ಕಹಳೆ,ಚಂಡೆ,ವಾದ್ಯ,ಆಕರ್ಷಕ ಕೊಡೆ,ದಫ್,ಕೋಲಾಟ,ಪೋಲೀಸ್ ಬ್ಯಾಂಡ್,ಅಗ್ನಿಶಾಮಕ,ಸ್ಕೌಟ್ಸ್ ಮತ್ತು ಗೈಡ್ಸ್,ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ.

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಮಾತನಾಡಿ ಕರಾವಳಿ ಉತ್ಸವ ಮೆರವಣಿಗೆಯಲ್ಲಿ ಜಿಲ್ಲೆಯ ಸಂಸ್ಕೃತಿಯ ಶಕ್ತಿ ಪ್ರದರ್ಶನವಾಗಬೇಕು ಎಂದರು. ಸಭೆಯಲ್ಲಿ ಬ್ಯಾರಿ ಅಕಾಡೆಮಿ ಅಧ್ಯಕ್ಷ ಮಹಮ್ಮದ್ ಹನೀಫ್,ನಗರಪಾಲಿಕೆ ಉಪ ಆಯುಕ್ತ ರಾಜು ಮೊಗವೀರ,ತಹಶೀಲ್ದಾರ್ ಮೋಹನರಾವ್,ಮೂಡಾ ಅಯುಕ್ತ ಮಹಮ್ಮದ್ ನಜೀರ್,ಎಸಿಪಿ ಉದಯಕುಮಾರ್ ಉಪಸ್ಥಿತರಿದ್ದರು.

Write A Comment