ಕನ್ನಡ ವಾರ್ತೆಗಳು

ಮಾರ್ಗೋಳಿ : ವಿದ್ಯಾರ್ಥಿಗೆ ಡಿಕ್ಕಿ ಹೊಡೆದ ಬೈಕ್ ಪರಾರಿಯಾಗುವಾಗ ರಿಕ್ಷಾಕ್ಕೆ ಡಿಕ್ಕಿ

Pinterest LinkedIn Tumblr

Margoli_Baik_Accident

ಕುಂದಾಪುರ: ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಬೈಕೊಂದು ಡಿಕ್ಕಿಯಾದ ಪರಿಣಾಮ ವಿದ್ಯಾರ್ಥಿ ಗಾಯಗೊಂಡು ಆಸ್ಪತ್ರೆಗೆ ಸೇರಿದ ಬೆನ್ನಿಗೆ ಅಪಘಾತ ನಡೆಸಿದ ಬೈಕ್ ಸವಾರ ಬೈಕ್ ನಿಲ್ಲಿಸದೇ ಪರಾರಿಯಾಗಲೆತ್ನಿಸಿದ್ದು, ಒವರ್ ಟೇಕ್ ಮಾಡಿ ಹೋದ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಗಾಯಗೊಂಡು ಆಸ್ಪತ್ರೆಗೆ ಸೇರಿದ ಘಟನೆ ಸೋಮವಾರ ಸಂಜೆ ಮಾರ್ಗೋಳಿ ಮತ್ತು ಮೂಡುಬಗೆಯಲ್ಲಿ ನಡೆದಿದೆ.

ಮಾರ್ಗೋಳಿ ನಿವಾಸಿ ವಾಲ್ಟರ್ ಹಾಗೂ ಪೂರ್ಣಿಮಾ ದಂಪತಿಗಳ ಪುತ್ರ ಸ್ಥಳೀಯ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ವೆಲ್ಸನ್ ಎಂಬಾತ ಹಾಗೂ ಬೈಕ್ ಸವಾರ ಸಾಗರದ ಪಡುಗೇರಿ ನಿವಾಸಿ ಸತೀಶ್(27) ಗಾಯಗೊಂಡು ಆಸ್ಪತ್ರೆಗೆ ಸೇರಿದವರು.

ಘಟನೆಯ ವಿವರ: ಸಾಗರ ಮೂಲದ ಸತೀಶ್ ತನ್ನ ಸ್ನೇಹಿತ ಧನ್ಯಕುಮಾರ್ ಎಂಬಾತನೊಂದಿಗೆ ಕುಂದಾಪುರದ ಕಡೆಗೆ ಹೊಸದಾಗಿ ಖರೀದಿಸಿದ್ದ ಬೈಕ್‌ನಲ್ಲಿ ಬರುತ್ತಿದ್ದರು. ಇದೇ ಸಂದರ್ಭ ಹಿಂಬದಿ ಸವಾರನನ್ನು ಕಂಡ್ಲೂರಿನಲ್ಲಿ ಇಳಿಸಿ ಕುಂದಾಪುರದ ಕಡೆಗೆ ಪ್ರಯಾಣಿಸುತ್ತಿದ್ದಾಗ ಮಾರ್ಗೋಳಿ ಎಂಬಲ್ಲಿ ವಿದ್ಯಾರ್ಥಿ ವೆಲ್ಸನ್ ಎಂಬಾತನಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಬಾಲಕ ಗಂಭೀರ ಗಾಯಗೊಂಡಿದ್ದು, ಬೈಕ್ ಸವಾರ ಸ್ಥಳದಲ್ಲಿ ನಿಲ್ಲದೇ ಪರಾರಿಯಾಗಿದ್ದನು. ಸ್ಥಲೀಯರು ಆತನನ್ನು ಬೆನ್ನಟ್ಟಿ ಅಡ್ಡಗಟ್ಟಿ ನಿಲ್ಲಿಸಿ ಪರಿಹಾರ ನೀಡುವಂತೆ ಮಾತುಕತೆ ನಡೆಸಿದಾಗ ಬಳ್ಕೂರಿನಲ್ಲಿ ಹೆಂಡತಿ ಮನೆ ಇದ್ದು ಅಲ್ಲಿ ನೀಡುವೆನೆಂದು ಸ್ಥಳೀಯರನ್ನು ನಂಬಿಸಿ ಮತ್ತೆ ವಾಪಾಸ್ಸು ಬೈಕಿನಲ್ಲಿ ಹೋಗಿದ್ದಾನೆ.

ಬಳ್ಕೂರಿನಲ್ಲಿ ಬೈಕ್ ನಿಲ್ಲಿಸದೇ ಮುಂದಕ್ಕೆ ಹೋದಾಗ ಹಿಂದಿನಿಂದ ಬಸ್ರೂರಿನ ಎಂಡ್ರೋ ಡಿಮೆಲ್ಲೋ ಎಂಬುವರ ಆಟೋ ರಿಕ್ಷಾದಲ್ಲಿ ಹೋದವರಿಗೆ ಅನುಮಾನ ಬಂದು ಮೂಡುಬಗೆ ಸಮೀಪ ಓವರ್‌ಟೇಕ್ ಮಾಡಿ ಮುಂದಕ್ಕೆ ಹೋಗಿದ್ದು, ಅಲ್ಲಿ ನಿಂತಿದ್ದ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಬೈಕ್ ಸವಾರ ಸತೀಶ ಹಿಂದಿನಿಂದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಸಂದರ್ಬ ಸತೀಶನಿಗೂ ಗಾಯಗಳಾಗಿದ್ದು ಕುಂದಾಪುರದ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ರಿಕ್ಷಾದ ಹಿಂಭಾಗ ನುಜ್ಜುಗುಜ್ಜಾಗಿದೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment