ಬೆಂಗಳೂರು, ನ. 27: ಇ ಮೇಲ್ ಹಾಗೂ ಕೊರಿಯರ್ ಸ್ಪರ್ಧೆಯನ್ನು ಎದುರಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆಯು ಇದೀಗ ಮತ್ತಷ್ಟು ಗ್ರಾಹಕ ಸ್ನೇಹಿಯಾಗಲು ಯತ್ನಿಸಿದೆ. ಇನ್ನು ಮುಂದೆ ಜನರು ಸ್ಪೀಡ್ ಅಥವಾ ರಜಿಸ್ಟರ್ಡ್ ಪೋಸ್ಟ್ ಕಳುಹಿಸಲು ಅಂಚೆ ಕಚೇರಿಗೆ ತೆರಳಿ ಸಾಲು ಹಚ್ಚಿ ನಿಲ್ಲಬೇಕಿಲ್ಲ. ಇಷ್ಟು ದಿನ ಪತ್ರ ತಲುಪಿಸುವ ಕೆಲಸವನ್ನಷ್ಟೇ ಮಾಡುತ್ತಿದ್ದ ಅಂಚೆ ವಿತರಕರು ಇನ್ನು ಮುಂದೆ ಮನೆಗೇ ಬಂದು ಪತ್ರ ಒಯ್ಯುತ್ತಾರೆ. ಇದಕ್ಕಾಗಿ ನೀವು ದೂರವಾಣಿ ಮೂಲಕ ಸಂಪರ್ಕಿಸಿ ತಿಳಿಸಬೇಕು ಅಷ್ಟೇ
ಗ್ರಾಹಕರು ಹೀಗೆ ಮಾಡಬೇಕು: ಪತ್ರವನ್ನು ಕಳುಹಿಸಲು ಇಚ್ಛಿಸುವ ಗ್ರಾಹಕ ಅಂಚೆ ಇಲಾಖೆಯ ವಿಚಾರಣೆ ಕೇಂದ್ರ (080-22863344) ಕ್ಕೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಬೇಕು. ಅಲ್ಲಿ ನಿಮ್ಮ ದೂರವಾಣಿ ಸಂಖ್ಯೆ ಹಾಗೂ ವಿಳಾಸ ಪಡೆಯಲಾಗುತ್ತದೆ. ನೀವು ಅನುಸರಿಸಬೇಕಾದ ನಿಯಮಗಳ ಕುರಿತೂ ತಿಳಿಸಲಾಗುತ್ತದೆ. ನಿಮ್ಮ ಹತ್ತಿರ 10 ಅಥವಾ ಅದಕ್ಕಿಂತ ಹೆಚ್ಚು ಪತ್ರಗಳು ಇದ್ದರೆ ಅಂಚೆ ಇಲಾಖೆಯ ಮಾರ್ಕೆಟಿಂಗ್ ಎಗ್ಸಿಕ್ಯೂಟಿವ್ ನಿಮ್ಮ ಹತ್ತಿರ ಬಂದು ಪತ್ರಗಳನ್ನು ಒಯ್ಯುತ್ತಾರೆ. ಅದಕ್ಕಿಂತ ಕಡಿಮೆ ಇದ್ದರೆ ಸ್ಥಳೀಯ ಅಂಚೆ ವಿತರಕರೇ ಪತ್ರವನ್ನು ಒಯ್ಯುತ್ತಾರೆ. ನಿಮ್ಮ ಮನೆಗೆ ಬಂದು ಒಯ್ಯಲು ಅಂಚೆ ಇಲಾಖೆ ವಿಶೇಷ ಶುಲ್ಕವನ್ನೂ ಆಕರಿಸುವುದಿಲ್ಲ. ಹೊಸ ಯೋಜನೆಗಳು: ದೂರವಾಣಿ, ಕೊರಿಯರ್ ಹಾಗೂ ಇ ಮೇಲ್‌ಗಳ ಸ್ಪರ್ಧೆ ಎದುರಿಸಲಾಗದೆ ಬಸವಳಿದಿದ್ದರೂ ಅಂಚೆ ಇಲಾಖೆಯಲ್ಲಿ ಗ್ರಾಹಕ ಸೇವೆಯನ್ನು ಮುಂದುವರಿಸಲಾಗಿತ್ತು.
ಅತ್ಯಂತ ಕಡಿಮೆ ದರದಲ್ಲಿ ಸಾಮಾನ್ಯ ಪತ್ರಗಳ ರವಾನೆ, ಅಂಚೆ ಕಾರ್ಡ್ ಮುದ್ರಣ ಹಾಗೂ ಮನಿ ಆರ್ಡರ್ ಸೇವೆಗಳನ್ನು ನಿಲ್ಲಿಸಿರಲಿಲ್ಲ. ಇದರಿಂದ ಇಲಾಖೆಗೆ ಸಾಕಷ್ಟು ನಷ್ಟವಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದರೂ ಸೇವೆಯನ್ನು ಸ್ಥಗಿತಗೊಳಿಸಿರಲಿಲ್ಲ. ದೇಶಾದ್ಯಂತ ಲಕ್ಷಾಂತರ ದಿನ ಪತ್ರಿಕೆಗಳನ್ನು ನಗಣ್ಯ ದರಕ್ಕೆ ಗ್ರಾಹಕರಿಗೆ ಪೂರೈಸುತ್ತಿತ್ತು. ಈ ಸೇವೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದರೂ ಆರ್ಥಿಕವಾಗಿ ಮೇಲೆತ್ತುವಲ್ಲಿ ಸಹಕಾರಿಯಾಗಿರಲಿಲ್ಲ. ನಂತರದಲ್ಲಿ ಬ್ಯಾಂಕಿಂಗ್, ವಿಮೆ, ತಕ್ಷಣ ಹಣ ರವಾನೆಯಂತಹ (instant money order) ನೂತನ ಸೇವೆಗಳನ್ನೂ ಆರಂಭಿಸಿತ್ತು. ಈಗ ಮನೆಯಿಂದಲೇ ಪತ್ರ ಪಡೆದು ರವಾನಿಸುವ ಮೂಲಕ ಕೊರೆಯರ್ ಸೇವೆಗೆ ಪ್ರಬಲ ಸ್ಪರ್ಧೆ ಒಡ್ಡಲು ಮುಂದಾಗಿದೆ.